English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Esther Chapters

1 ಅಹಷ್ವೇರೋಷನು ರಾಜನಾಗಿದ್ದಾಗ ನಡೆದ ಘಟನೆ. ಹಿಂದೂಸ್ಥಾನದಿಂದ ಇಥಿಯೋಪ್ಯದ ತನಕ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅವನು ಆಳುತ್ತಿದ್ದನು.
2 ಅವನ ರಾಜ್ಯದ ರಾಜಧಾನಿ ನಗರವಾಗಿದ್ದ ಶೂಷನ್‌ನಲ್ಲಿಯ ಸಿಂಹಾಸನದಿಂದ ಅರಸನು ರಾಜ್ಯವಾಳುತ್ತಿದ್ದನು.
3 ತನ್ನ ಆಳ್ವಿಕೆಯ ಮೂರನೆ ವರ್ಷದಲ್ಲಿ ರಾಜ್ಯದ ಅಧಿಕಾರಿಗಳಿಗೂ ನಾಯಕರುಗಳಿಗೂ ಒಂದು ಔತಣವನ್ನು ಏರ್ಪಡಿಸಿದನು. ಮೇದ್ಯ. ಪರ್ಶಿಯದ ಎಲ್ಲಾ ಸೈನ್ಯಾಧಿಕಾರಿಗಳೂ ಪ್ರಧಾನರೂ ಔತಣದಲ್ಲಿ ಭಾಗವಹಿಸಿದ್ದರು.
4 ಔತಣ ಸಮಾರಂಭವು ನೂರೆಂಭತ್ತು ದಿವಸಗಳ ತನಕ ಮುಂದುವರೆಯಿತು. ಆ ಸಮಯದಲ್ಲಿ ತನ್ನ ರಾಜ್ಯದ ಸಕಲ ವೈಭವವನ್ನೂ ಅರಮನೆಯ ಐಶ್ವರ್ಯವನ್ನೂ ಅತಿಥಿಗಳಿಗೆ ಪ್ರದರ್ಶಿಸಿದನು.
5 ಆ ನೂರೆಂಭತ್ತು ದಿವಸಗಳು ಕಳೆದ ಬಳಿಕ ಅಹಷ್ವೇರೋಷನು ಮತ್ತೆ ಇನ್ನೊಂದು ಔತಣವನ್ನು ಒಂದು ವಾರದ ತನಕ ಮುಂದುವರಿಸಿದನು. ಇದು ಅರಮನೆಯ ಒಳ ಉದ್ಯಾನವನದಲ್ಲಿ ನಡೆಯಿತು. ಇದಕ್ಕೆ ಶೂಷನ್ ನಗರದಿಂದ ಗಣ್ಯರು, ಸಾಮಾನ್ಯರು ಎಂಬ ಭೇದಭಾವವಿಲ್ಲದೆ ಎಲ್ಲರೂ ಆಮಂತ್ರಿಸಲ್ಪಟ್ಟಿದ್ದರು.
6 ಆ ಒಳ ಉದ್ಯಾನವನವು ಬಿಳಿ ಮತು ನೀಲಿಬಣ್ಣಗಳ ಬಟ್ಟೆಗಳಿಂದ ಶೃಂಗರಿಸಲ್ಪಟ್ಟಿತ್ತು. ಅವುಗಳನ್ನು ಬಿಳಿ ಮತ್ತು ನೇರಳೆ ಬಣ್ಣದ ದಾರಗಳಿಂದ ಬೆಳ್ಳಿಯ ಉಂಗುರಗಳಲ್ಲಿ ಕಟ್ಟಲ್ಪಟ್ಟ ಅಮೃತಶಿಲೆಯ ಕಂಬಗಳಿಗೆ ತೂಗುಹಾಕಿದ್ದರು. ಬೆಲೆಬಾಳುವ ಕಲ್ಲುಗಳಿಂದಲೂ ಮುತ್ತು ಚಿಪ್ಪು, ರತ್ನಶಿಲೆಗಳಿಂದಲೂ ಅಲಂಕೃತವಾದ ನೆಲದ ಮೇಲೆ ಬೆಳ್ಳಿಬಂಗಾರಗಳಿಂದ ಮಾಡಿದ್ದ ಆಸನಗಳನ್ನಿಟ್ಟರು.
7 ಅತಿಥಿಗಳಿಗೆ ಬಂಗಾರದ ಪಾನಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಬೇರೆಬೇರೆ ವಿಧದ ಪಾತ್ರೆಗಳನ್ನು ಉಪಯೋಗಿಸಲಾಗಿತ್ತು. ರಾಜನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವು ಧಾರಾಳವಾಗಿ ಹಂಚಲ್ಪಡುತ್ತಿತ್ತು.
8 ತಮ್ಮ ಇಷ್ಟಾನುಸಾರವಾಗಿ ದ್ರಾಕ್ಷಾರಸವನ್ನು ಕುಡಿಯಲು ಅತಿಥಿಗಳಿಗೆ ಕೊಡಬೇಕೆಂದು ಸೇವಕರಿಗೆ ರಾಜಾಜ್ಞೆಯಾಗಿತ್ತು. ರಾಜಸೇವಕರು ಆ ಆಜ್ಞೆಯನ್ನು ಪಾಲಿಸಿದರು.
9 ರಾಜನ ಅರಮನೆಯಲ್ಲಿ ವಷ್ಟಿರಾಣಿಯೂ ಅದೇ ಪ್ರಕಾರ ಸ್ತ್ರೀಯರಿಗೂ ಔತಣವನ್ನು ಮಾಡಿಸಿದ್ದಳು.
10 (10-11) ಔತಣದ ಏಳನೆಯ ದಿವಸದಲ್ಲಿ ರಾಜನು ದ್ರಾಕ್ಷಾರಸ ಕುಡಿದು ಆನಂದಲಹರಿಯಲ್ಲಿದ್ದಾಗ ತನ್ನ ಆಸ್ಥಾನ ಕಂಚುಕಿಯರಾದ ಮೆಹೂಮಾನ್, ಬಿಜತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೀತರ್, ಕರ್ಕಸ್ ಎಂಬ ಏಳು ಮಂದಿಗೆ ಹೋಗಿ ವಷ್ಟಿರಾಣಿಯನ್ನು ತನ್ನ ರಾಜಮುಕುಟವನ್ನು ಧರಿಸಿ ಕರೆತರಲು ಆಜ್ಞಾಪಿಸಿದನು. ವಷ್ಟಿರಾಣಿಯು ಅತ್ಯಂತ ಸುಂದರಿಯಾಗಿದ್ದಳು. ಆಕೆಯ ಸೌಂದರ್ಯವನ್ನು ತನ್ನ ರಾಜ್ಯದ ಅಧಿಕಾರಿಗಳಿಗೆ ತೋರಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.
12 ಆಸ್ಥಾನಸೇವಕರು ವಷ್ಟಿರಾಣಿಗೆ ರಾಜಾಜ್ಞೆಯನ್ನು ತಿಳಿಸಿದಾಗ ಆಕೆಯು ಬರಲು ನಿರಾಕರಿಸಿದಳು. ಇದರಿಂದ ರಾಜನು ಕೋಪೋದ್ರಿಕ್ತನಾದನು.
13 (13-14) ಕಾನೂನು ಮತ್ತು ದಂಡನೆಗಳ ಬಗ್ಗೆ ಪರಿಣಿತರಾಗಿದ್ದ ಮಂತ್ರಿಗಳ ಸಲಹೆ ಕೇಳುವುದು ರಾಜನ ವಾಡಿಕೆಯಾಗಿತ್ತು. ಅದೇ ಪ್ರಕಾರ ರಾಜನು ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಆಲೋಚಿಸಿದನು. ಇವರು ರಾಜನಿಗೆ ನಿಕಟವರ್ತಿಗಳಾಗಿದ್ದರು. ಅವರು ಯಾರೆಂದರೆ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷಿಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಮೇದ್ಯ, ಪಾರಸಿಯ ಪ್ರಮುಖ ಅಧಿಕಾರಿಗಳು.
15 “ಆಸ್ಥಾನ ಸೇವಕರ ಮೂಲಕ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ವಷ್ಟಿ ರಾಣಿಯು ನಿರಾಕರಿಸಿದ್ದಾಳೆ. ಇಂಥಾ ತಪ್ಪಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕು?” ಎಂದು ವಿಚಾರಿಸಿದನು.
16 ಇತರ ಅಧಿಕಾರಿಗಳು ಆಲಿಸುತ್ತಿದ್ದಾಗ ಮೆಮೂಕಾನ್ ಎದ್ದುನಿಂತು, “ರಾಣಿ ವಷ್ಟಿಯು ತಪ್ಪು ಮಾಡಿದಳು. ಇದು ರಾಜನಿಗೆ ವಿರುದ್ಧವಾಗಿ ಮಾತ್ರವೇ ಅಲ್ಲ, ರಾಜ್ಯದ ಸಕಲ ನಾಯಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ವಿರುದ್ಧವಾದದ್ದು.
17 ಹೇಗೆಂದರೆ: ರಾಣಿಯು ಮಾಡಿದ್ದನ್ನು ರಾಜ್ಯದ ಇತರ ಸ್ತ್ರೀಯರು ಕೇಳಿ ತಾವೂ ತಮ್ಮ ಗಂಡಂದಿರಿಗೆ ಅವಿಧೇಯರಾಗುವರು. ಅವರು ತಮ್ಮ ಗಂಡಂದಿರಿಗೆ, ‘ರಾಜ ಅಹಷ್ವೇರೋಷನು ವಷ್ಟಿರಾಣಿಯನ್ನು ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದನು, ಆದರೆ ಆಕೆ ಬರಲಿಲ್ಲ’ ಎಂದು ಹೇಳುವರು.
18 “ಪರ್ಶಿಯ ಮತ್ತು ಮೇದ್ಯ ನಾಯಕರುಗಳ ಹೆಂಡತಿಯರು ಸಹ ವಷ್ಟಿರಾಣಿ ಈ ಹೊತ್ತು ಮಾಡಿದ್ದನ್ನು ಕೇಳಿದ್ದಾರೆ. ಅವರು ಸಹ ವಷ್ಟಿರಾಣಿಯ ನಡತೆಯಿಂದ ಪ್ರೋತ್ಸಾಹಿತರಾಗಿ ರಾಜನ ಮುಖ್ಯ ನಾಯಕರುಗಳೊಡನೆ ಅದೇರೀತಿ ವರ್ತಿಸುವರು. ಇದರಿಂದಾಗಿ ಅಗೌರವವೂ ಕೋಪವೂ ತುಂಬಿಕೊಳ್ಳುತ್ತವೆ.
19 “ಆದ್ದರಿಂದ ರಾಜನು ಒಪ್ಪುವುದಾದರೆ ನನ್ನ ಸಲಹೆ ಏನೆಂದರೆ, ಅರಸನು ಒಂದು ರಾಜಾಜ್ಞೆಯನ್ನು ಹೊರಡಿಸಬೇಕು. ಆ ಆಜ್ಞೆಯು ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳಲ್ಲಿ ಬರೆಯಲ್ಪಡಬೇಕು. ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳು ಎಂದಿಗೂ ಬದಲಾಗುವದಿಲ್ಲ. ರಾಜಾಜ್ಞೆಯು ಏನೆಂದರೆ, ಅರಸನಾದ ಅಹಷ್ವೇರೋಷನ ಸನ್ನಿಧಿಗೆ ರಾಣಿಯು ಪ್ರವೇಶಿಸಲೇ ಕೂಡದು. ಮಾತ್ರವಲ್ಲ ರಾಜನು ವಷ್ಟಿ ರಾಣಿಯ ಸ್ಥಾನವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ.
20 ಈ ರಾಜಶಾಸನವು ವಿಶಾಲ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರಕಟಿಸಲ್ಪಟ್ಟಾಗ ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು. ಶ್ರೇಷ್ಠರೂ ಕನಿಷ್ಠರೂ ಆದ ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು.”
21 ಅರಸನೂ ಅವನ ಪ್ರಮುಖ ಅಧಿಕಾರಿಗಳೂ ಈ ಸಲಹೆಯನ್ನು ಕೇಳಿ ಸಂತೋಷಪಟ್ಟರು ಮತ್ತು ಅಹಷ್ವೇರೋಷ ರಾಜನು ಮೆಮೂಕಾನ್ ಹೇಳಿದ ಹಾಗೆ ಮಾಡಿದನು.
22 ಅಹಷ್ವೇರೋಷನು ತನ್ನ ರಾಜ್ಯದ ಎಲ್ಲಾ ಕಡೆಗಳಿಗೆ, ಎಲ್ಲಾ ಸಂಸ್ಥಾನಗಳಿಗೆ ಅವರವರ ಭಾಷೆಯಲ್ಲಿ ಪತ್ರಗಳನ್ನು ಬರೆಯಿಸಿ ರವಾನಿಸಿದನು. ಅವರವರ ಭಾಷೆಯಲ್ಲಿ ಬರೆದ ಪತ್ರದಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಸಂಸಾರವನ್ನು ಆಳಬೇಕು ಎಂಬುದಾಗಿ ಬರೆಯಲ್ಪಟ್ಟಿತ್ತು.
×

Alert

×